ಇದು ನನ್ನ ಪೂಜ್ಯ ಗುರುಗಳಾದ ಶ್ರೀ ಆರ್. ಕೆ. ಶ್ರೀಕಂಠ ಕುಮಾರ ಸ್ವಾಮಿ ಯೆವರ 'ಹೃದಯ ಸಂಪನ್ನತೆ" ಎಂಬ ಪುಸ್ತಕದಿಂದ ಆಯ್ದ ಲೇಖನ. ಇದನ್ನು ಓದಿದಾಗ ನನ್ನ ಕಂಗಳು ತುಂಬಿ ಹೃದಯ ಭಾರವಾಗಿತ್ತು. ಇದೋ ನಿಮಗಾಗಿ....ಗುರುಗಳು ಹೇಳಿದಂತೆ....
೧೯೫೦ ನೇ ಇಸವಿ ಇರಬೇಕು. ಭದ್ರಾವತಿಯಲ್ಲಿ ನನ್ನ ತೀರ್ಥರೂಪರ ಸ್ನೇಹಿತರಾಗಿದ್ದ ಕಳಸ ಸುಬ್ರಮಣ್ಯ ಶಾಸ್ತ್ರಿಗಲೆಮ್ಬುವರು ದಿವಂಗತರಾದರು. ತೀರ್ಥರೂಪರು ನೋಡಲು ಹೋಗಿದ್ದರು. ಹೋಗಿ ಬಂದು ನನ್ನನ್ನು ಕುರಿತು " ಪುಟ್ಟಣ್ಣ! ಅಲ್ಲಿ ಯಾರು ಇಲ್ಲ ಅಂತ ಕಾಣುತ್ತೆ. ನೀನು ಹೋಗಿ ಶವವನ್ನು ಸ್ಮಶಾನಕ್ಕೆ ಹೊತ್ತು ಬಾ. ಈಗ ನನ್ನ ಕೈಯಲ್ಲಿ ಆಗುವುದಿಲ್ಲ" ಎಂದರು. ನನ್ನ ತಾಯಿಯವರು ಸ್ವಲ್ಪ ಆಕ್ಷ್ಯೇಪನೆಯ ಧ್ವನಿ ಎತ್ತಿದರು (ಜೀವತ್ಪಿತ್ರು ಎಂಬ ಕಾರಣದಿಂದ). ಆಗ ನಮ್ಮ ತಂದೆಯವರು ಅವರ ತಾಯಿ ಮಾಡಿದ್ದನ್ನು ಸ್ಮರಿಸಿಕೊಂಡು ಕಥೆ ಹೇಳಿದರು.
೧೯೦೫ ನೇ ಇಸವಿ. ನನ್ನ ಅಜ್ಜನವರ ಸಂಸಾರ ಕನ್ನೆ ಗೌಡರ ಕೊಪ್ಪಲಿನಲ್ಲಿ ವಾಸಿಸುತಿದ್ದರಂತೆ. ನನ್ನ ತಂದೆಯವರಿಗೆ ಸೂರ್ಯ ನಾರಾಯಣ ಎಂಬ ಅನ್ನ, ಸುಬ್ರಾಯ, ಕೃಷ್ಣಾ ಎಂಬ ಇಬ್ಬರು ತಮ್ಮಂದಿರು. ಕೃಷ್ಣನಿಗೆ ಇನ್ನು ೧೧ ವರುಷ. ಉಪನಯನ ಆಗಿರಲಿಲ್ಲ. ಏನೋ ವ್ಯಾಧಿ ಬಂದು ಮರಣ ಹೊಂದಿದ. ಆ ಸಮಯದಲ್ಲಿ ನನ್ನ ಅಜ್ಜನವರು, ದೊಡ್ಡಪ್ಪ ಸೂರ್ಯ ನಾರಾಯಣ ರುದ್ರ ಪಟ್ಟಣಕ್ಕೆ ಹೋಗಿದ್ದರಂತೆ. ಮೆನೆಯಲ್ಲಿ ನನ್ನ ತಂದೆ, ಸುಬ್ರಾಯ, ನನ್ನ ಅಜ್ಜಿ ಮೂರೇ ಜನ. ಮಗ ಮರಣ ಹೊಂದಿ ಶವ ಬಿದ್ದಿದೆ. ಸಾಯಂಕಾಲ ಆರು ಗಂಟೆ, ಕತ್ತಲಾಗುವ ಸಮಯ. ಆಗ ಅಜ್ಜಿ ನನ್ನ ತಂದೆಯವರನ್ನು ಕುರಿತು "ಶೋಮಿ! ಹೆಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದರೆ ಪಕ್ಕದ ಮನೆಯವರೆಲ್ಲಾ ಯಾರು ಅಡುಗೆ ಮಾಡಲು ಆಗುವುದಿಲ್ಲ. (ಶವ, ಸ್ಮಶಾನಕ್ಕೆ ಹೋಗುವವರೆಗೂ ಅಕ್ಕ ಪಕ್ಕದ ಮನೆಯವರು ಯಾರೂ ಒಲೆ ಹಚ್ಚಬಾರದೆಂಬ ಪದ್ಧತಿ ಇತ್ತು.) ನಾವು ನಿನ್ನ ತಂದೆಯವರಿಗೊಸ್ಕರ ಕಾದು ಕುಳಿತುಕೊಂಡು, ಬಾಕಿಯವರನೆಲ್ಲಾ ಉಪವಾಸ ಮಾಡಿಸುವುದು ಧರ್ಮವಲ್ಲ. ನಡಿ. ನಾನು ಶವವನ್ನು ಹೊತ್ತು ಕೊಳ್ಳುತ್ತೇನೆ, lanturn ಹಿಡಿದು ಕೊಂಡು ನೀನು ನನ್ನ ಜೊತೆಯಲ್ಲಿ ಬಾ" ಎಂದರಂತೆ. ಅದರಂತೆ ನಮ್ಮ ತಂದೆ lanturn ಹಿಡಿದು ಕೊಂಡು ಹೊರೆಟಿದ್ದಾರೆ. ನನ್ನ ಅಜ್ಜಿಯವರು ತಮ್ಮ ಮಗನ ಶವವನ್ನು ಹೆಗಲ ಮೇಲೆ ಹಾಕಿಕೊಂಡು ದುಡು ದುಡು ನಡೆದು ಹೊರೆಟಿದ್ದಾರೆ. ಕೊಪ್ಪಲಿನಿಂದ ಬೆಟ್ಟದ ಕಿಬ್ಬಿ ಹತ್ತಿರ ಸ್ಮಶಾನಕ್ಕೆ ಹೋಗಬೇಕು. ಹೊರಡುವ ವೇಳೆಗೆ ಏಳು ಘಂಟೆಯಾಗಿರಬಹುದು. ಸ್ಮಶಾನ ತಲುಪುವ ವೇಳೆಗೆ ಅರಮನೆಯಿಂದ ಗುಂಡು ಹೊಡೆದ ಶಬ್ದ ಕೇಳಿಸಿದೆ. (ಆಗ ರಾತ್ರಿ ಒಂಬತ್ತು ಗಂಟೆಗೆ ಗುಂಡು ಹಾರಿಸುತ್ತಿದ್ದರು.) ಅಜ್ಜಿಯವರು ಸ್ಮಶಾನ ತಲುಪಿದ ತಕ್ಷಣ ದ್ವಾರದಲ್ಲಿಯೇ ನನ್ನ ತಂದೆಯವರನ್ನು ನಿಲ್ಲಿಸಿ " ಶೋಮಿ! ನೀನೇನು ಒಳಕ್ಕೆ ಬರಬೇಡ. ಭಯಪಟ್ಟು ಕೊಂಡಿಯೇ" ಎಂದು ಹೇಳಿ ಅವರನ್ನು ಅಲ್ಲಿಯೇ ನಿಲ್ಲಿಸಿ ಕಾವಲುಗಾರನೊಡನೆ ಒಳಗೆ ಹೋಗಿ, ಬೆರಣಿಯನ್ನು ಒತ್ತಿ ಚಿತೆ ಮಾಡಿ, ಮಗನನ್ನು ಅದರ ಮೇಲೆ ಮಲಗಿಸಿದರಂತೆ. ಅಲ್ಲಿಂದಲೇ ಗಟ್ಟಿಯಾಗಿ ಕೂಗಿದರಂತೆ! "ಶೋಮಿ ! ಬೆಂಕಿ ಹಚ್ಚುತಿದ್ದೇನೆ. ಭಯ ಪಡಬೇಡ" ಹೀಗೆ ಹೇಳಿ ಬೆಂಕಿ ಹಚ್ಚಿದ್ದಾರೆ. ಅದು ಪೂರ್ತಿ ಹತ್ತುವವರೆಗೂ ಇದ್ದು ಹೊರಗಡೆ ಬಂದು, ಇಬ್ಬರೂ ಕಾರಂಜಿ ಕೆರೆಯಲ್ಲಿ ಸ್ನಾನ ಮಾಡಿ ಮನೆಗ ಬಂದರಂತೆ. ಮನೆಗೆ ಬಂದಮೇಲೆ ಸತ್ತ ಮಗನನ್ನು ನೆನೆಸಿಕೊಂಡು ಗಟ್ಟಿಯಾಗಿ ಅತ್ತರಂತೆ!. ಅದುವರೆಗೂ ದುಃಖದ ವೇಗವನ್ನು ತಡೆದು ಕೊಂಡು, ಕರ್ತವ್ಯವನ್ನೇ ಪ್ರಧಾನವಾಗಿ ತಿಳಿದು, ತಮ್ಮ ಕಾರ್ಯವನ್ನು ನೆರವೇರಿಸಿದ ಮಹಾ ಸಾಧ್ವಿ ನನ್ನ ಅಜ್ಜಿ. ಮಾರನೆ ದಿನಾ ಬಂದ ನನ್ನ ಅಜ್ಜ ಮತ್ತು ದೊಡ್ಡಪ್ಪ ಇಬ್ಬರೂ ಆಶ್ಚರ್ಯ ಪಟ್ಟಿದ್ದಾರೆ.
ಸುಮಂಗಲಿಯಾದ, ಹೆಣ್ಣಾದ ನನ್ನ ಅಜ್ಜಿ ಎಲ್ಲಿ? ಹೆಣ ನೋಡಿದರೆ ಏಕೆ, ಮರಣದ ಸುದ್ಧಿ ಕೇಳಲೂ ಹೇಳಲೂ ಭಯಪಡುವ ನಾವೆಲ್ಲಿ!. ಅಜ್ಜಿಯನ್ತಹವರೆ ಪ್ರಾತಃ ಸ್ಮರಣೀಯರು!
ಈ ಕಥೆ ಹೇಳಿ ನನ್ನ ತೀರ್ಥರೂಪರು ನನ್ನನ್ನು ಶಾಸ್ತ್ರಿಗಳವರ ಶವವನ್ನು ಹೊರಲು ಕಳಿಸಿದರು. ಹೋಗಿ ಹೊತ್ತು ಬಂದೆ. ಅದಕ್ಕಿಂತ ಪುಣ್ಯ ಕೆಲಸ ಬೇರೆ ಇಲ್ಲವೆಂಬುದನ್ನು ಕಂಡು ಕೊಂಡಿದ್ದೇನೆ.
ಇನ್ನು ನನ್ನ ಅನುಭವ.,
ಇಸವಿ ೨೦೦೬ ಇರಬಹುದು. ನನ್ನ ಸ್ನೇಹಿತರೊಬ್ಬರ ತಂದೆ ತೀರಿಕೊಂಡಿದ್ದರು. ನಾನು ಹೋಗಿದ್ದೆ. ಬಂದ ಜನ ದುಖ ವಿಚಾರಿಸಿದರೆ ಹೊರತು ಯಾರು ಸ್ಮಶಾನಕ್ಕೆ ಬರಲು ತಯಾರಿಲ್ಲ. ಕೇಳಿದರೆ ಅವರ ಬದುಕಿರುವ ತಂದೆ ತಾಯಿಗಳಿಗೆ ಏನೋ ಆಗುತ್ತದೆ ಎಂಬ ಭಯ. ಕೊನೆಗೆ ಸ್ಮಶಾನಕ್ಕೆ ಹೋದವರು, ನನ್ನ ಸ್ನೇಹಿತರು, ಅವರ ಚಿಕ್ಕಪ್ಪ(ಪಾಪ ವಯಸ್ಸಾದವರು), ನಾನು, ಅಂಬುಲೆನ್ಸಿನ ಡ್ರೈವರ್ ಹಾಗೆಯೇ ನನ್ನ ಸ್ನೇಹಿತರ ಭಾವ - ೫ ಜನ. ಚಾಮರಾಜ ಪೇಟೆ ಸ್ಮಶಾನದಲ್ಲಿ ದಹನ. ನನ್ನ ಸ್ನೇಹಿತರ ಭಾವ ಸ್ಮಶಾನದ ಒಳಗೆ ಬರಲು ಅವರ ತಂದೆ ತಾಯಿ ಬಿಡಲಿಲ್ಲ. ಉಳಿದವರು - ಹೆಣ ಹೊರಲು ನಾನು, ಸ್ನೇಹಿತರ ಚಿಕ್ಕಪ್ಪ, ಅಂಬುಲೆನ್ಸಿನ ಡ್ರೈವರ್...ಇನ್ನೊಂದು ಕೈ ಕಮ್ಮಿ - ಕರ್ತೃ ಸಂಸ್ಕಾರವನ್ನು ಮಾಡುತ್ತಾನೋ ಹೆಣವನ್ನು ಹೊರುತ್ತಾನೋ ..ಆ ದಿನಾ ನನಗೆ ಆದ ಜಿಗುಪ್ಸೆ ಹೇಳಲಸಾಧ್ಯ. ಕೊನೆಗೆ ಸ್ಮಶಾನ ನೋಡಿಕೊಳ್ಳುವ ಕೆಲಸಗಾರ ಸಹಾಯಕ್ಕೆ ಬಂದ - ಇರಲಿ - ನಮ್ಮ ಈ ಪೆದ್ದುತನದ ಪರಾಕಾಷ್ಟೆಯನ್ನು ಏನೆಂದು ವಿವರಿಸೋಣ...ನನ್ನ ಬೇಡಿಕೆ ಇಷ್ಟೇ - ಯಾರಾದರೂ ಮರಣ ಹೊಂದಿದಾಗ ದಯವಿಟ್ಟು ಹೋಗಿ ಸಹಾಯ ಮಾಡಿ - ಸತ್ತವರ ಮನೆಯವರಿಗೆ ನಿಮ್ಮ ಸಹಾಯ ಖಂಡಿತಾ ಬೇಕಿರುತ್ತದೆ. ಸ್ಮಶಾನಕ್ಕೆ ಹೋಗುವುದರಿಂದ ಬದುಕಿರುವವರಿಗೆ ಏನೂ ಆಗುವುದಿಲ್ಲ . ಆಗಲೂ ಸಾಧ್ಯವಿಲ್ಲ.
Friday, April 24, 2009
Subscribe to:
Posts (Atom)